ಎಂಟಮೀಬ-
	ಪ್ರೋಟೊeóÉೂೀವ ವಂಶದ ರೈeóÉೂಪೋಡ ವರ್ಗದ ಅಮೀಬೈನ ಗಣದ ಏಕ ಕೋಶಕ ಪರಾವಲಂಬಿ ಜೀವಿ. ಕುಟುಂಬದ ಹೆಸರು ಎಂಡ ಆಮೀಡೆ. ಈ ಕುಟುಂಬಕ್ಕೆ ಸೇರಿದ ಜೀವಿಗಳೆಲ್ಲವೂ ಪರತಂತ್ರ ಜೀವನವನ್ನು ನಡೆಸುತ್ತವೆ. ಸಾಮಾನ್ಯವಾಗಿ ಕಶೇರುಕಗಳ ಮತ್ತು ಅಕಶೇರುಕಗಳ ಜೀರ್ಣಾಂಗಗಳೇ ಇವುಗಳ ವಾಸಸ್ಥಾನ. ಒಂದೇ ಜಾತಿಯ ಎಂಟಮೀಬಗಳು ನಾನಾ ರೀತಿಯ ಜೀವಿಗಳಲ್ಲಿರುವುದು ಇವುಗಳ ವಿಶಿಷ್ಟ ಲಕ್ಷಣ. ಗೆದ್ದಲು ಹುಳುವಿನ ಕರುಳಿನಿಂದ ಪ್ರೈಮೇಟುಗಳ ಜೀರ್ಣಾಂಗಗಳ ವರೆಗೆ ಇವುಗಳ ದಾಳಿ ನಡೆದಿದೆ. ಕೆಲವು ಎಂಟಮೀಬಗಳು ಆಶ್ರಯದಾತ ಜೀವಿಗಳಿಗೆ ಯಾವ ತೊಂದರೆಯನ್ನೂ ಕೊಡದೆ ಅವುಗಳಿಗೆ ಒಂದು ರೀತಿಯ ಅನುಕೂಲವನ್ನೇ ಮಾಡುತ್ತವೆ. ಆದರೆ ಎಂಟಮೀಬ ಹಿಸ್ಟೊಲಿಟಿಕ ಎಂಬ ಪ್ರಬೇಧ ಮಾತ್ರ ಅತ್ಯಂತ ಹಾನಿಕಾರಕ. ಈ ಜೀವಿಗಳು ಮನುಷ್ಯನ ಕರುಳಿನಲ್ಲಿ ವಾಸಿಸುತ್ತವೆ. ಇವುಗಳ ದಾಳಿಯಿಂದ ಆಮಶಂಕೆ ಅಥವಾ ರಕ್ತಭೇದಿ ಎಂಬ ಭಯಂಕರ ರೋಗ ಬರುತ್ತದೆ. ಇವು ಕರುಳಿನ ಒಳಗೋಡೆಯನ್ನು ಘಾಸಿಗೊಳಿಸುತ್ತವೆ.

	ಈ ಕೆಳಕಂಡ ಜೀವಿಗಳನ್ನು ಎಂಟಮೀಬಿಡೆ ಕುಟುಂಬಕ್ಕೆ ಸೇರಿಸಲಾಗಿದೆ. ಎಂಟಮೀಬ ಹಿಸ್ಟೊಲಿಟಿಕ ಎಂಬುದು ಮನುಷ್ಯನ ಕರುಳಿನಲ್ಲಿ ವಾಸಿಸುತ್ತದೆ; ಇದು ಹಾನಿಕಾರಕ. ಎಂ.ಕೋಲೈ ಎಂಬುದೂ ಮನುಷ್ಯನ ಕರುಳಿನಲ್ಲಿ ವಾಸಿಸುತ್ತದೆ. ಇದರಿಂದ ಯಾವ ತೊಂದರೆಯೂ ಇಲ್ಲ. ಎಂ.ಜಿಂಜಿವ್ಯಾಲಿಸ್ ಎಂಬುದು ಮನುಷ್ಯನ ವಸಡು ಮತ್ತು ಹಲ್ಲುಗಳ ಸಂದಿನಲ್ಲಿ ವಾಸಿಸುತ್ತದೆ. ಎಂ. ಬ್ಲಾಟ ಎಂಬುದು ಜಿರಳೆಯ ಜೀರ್ಣಾಂಗಗಳಲ್ಲಿ ಇರುತ್ತದೆ. ಎಂ. ರನಾರಂ ಕಪ್ಪೆಯ ಜೀರ್ಣಾಂಗಗಳಲ್ಲಿ ಇದೆ. ಎಂ. ಬೋವಿಸ್ ಎಂಬುದು ದನಗಳ ಕರುಳಿನಲ್ಲಿ ಇರುತ್ತದೆ. ಎಂ. ಓವಿಸ್ ಎಂಬುದು ಕುರಿಗಳ ಜೀರ್ಣಾಂಗಗಳಲ್ಲಿ ಕಂಡು ಬರುತ್ತದೆ. ಎಂ.ಈಕ್ವಿ ಎಂಬುದು ಕುದುರೆಗಳ ಕರುಳಿನಲ್ಲಿ ಇದೆ.

	ಈ ಎಲ್ಲ ಜೀವಿಗಳನ್ನು ಪರತಂತ್ರ ಅಮೀಬಗಳು ಎಂದು ಕರೆಯುತ್ತಾರೆ. ಇವು ತಮ್ಮ ರಚನೆಯಲ್ಲಿ ಸ್ವತಂತ್ರಜೀವಿಯಾದ ಅಮೀಬವನ್ನು ಹೋಲುತ್ತದೆ. ಆದರೆ ಸಂಕುಚಿತ ಸ್ಥಳಾವಕಾಶ (ಕಂಟ್ರಾಕ್ಟೈಲ್ ವ್ಯಾಕ್ಯೂಲ್) ಮಾತ್ರ ಇವುಗಳಲ್ಲಿಲ್ಲ.

	ಎಂಟಮೀಬ ಹಿಸ್ಟೊಲಿಟಿಕ: ಇದರ ವಾಸ ಮನುಷ್ಯನ ದೊಡ್ಡ ಕರುಳಿನಲ್ಲಿ. ಇದರಿಂದ ಆಮಶಂಕೆ ಬರುತ್ತದೆ. ಪ್ರಪಂಚದ ಎಲ್ಲ ದೇಶಗಳಲ್ಲಿಯೂ ಇದು ಹರಡಿದೆ. ಆದರೆ ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಇದರ ಪ್ರಸಾರ ಅಧಿಕ. ಇದು ಕರುಳಿನ ಒಳಗೋಡೆಯ ಮ್ಯೂಕಸ್ ಪೊರೆಯನ್ನು ತನ್ನ ಶರೀರದಿಂದ ಉತ್ಪತ್ತಿಯಾಗುವ ಹಿಸ್ಟೋಲೈಸಿನ್ ಎಂಬ ಕಿಣ್ವದಿಂದ ಕರಗಿಸಿ ಕರುಳಿನ ಗೋಡೆಯಲ್ಲಿರುವ ಅನುಲೇಪಕ ಅಂಗಾಂಶವನ್ನು ನಾಶಗೊಳಿಸಿ ಗಾಯಗಳನ್ನು ಉಂಟುಮಾಡುತ್ತದಲ್ಲದೆ, ಸೋರುವ ರಕ್ತದಲ್ಲಿರುವ ಕೆಂಪುರಕ್ತಕೋಶಗಳನ್ನು ಹಿಡಿದು ತಿನ್ನುತ್ತದೆ.

	ಪ್ರಾಣಿಯ ರಚನೆ: ಅಮೀಬ ಜೀವಿ ಹೇಗೋ ಹಾಗೆ ಇದಕ್ಕೂ ನಿರ್ದಿಷ್ಟಾಕಾರದ ದೇಹವಿಲ್ಲ. ಶರೀರದಿಂದ ಹೊರ ಚಾಚುತ್ತಿರುವ ಒಂದೆರಡು ಮಿಥ್ಯ ಪಾದಗಳಿವೆ. ಪ್ರಾಣಿಯ ಸುತ್ತಳತೆ 1/400 ಅಥವಾ 1/600 ಇಂಚಿನಷ್ಟು. ಸೂಕ್ಷ್ಮದರ್ಶಿಯಲ್ಲಿ ನೋಡಿದಾಗ ಇವು ಜೀವರಸದ ತುಣುಕುಗಳಂತೆ ಕಾಣುತ್ತವೆ. ಶರೀರದ ಮಧ್ಯದಲ್ಲಿ ದುಂಡಗಿರುವ ನ್ಯೂಕ್ಲಿಯಸ್ ಇದೆ. ಕೋಶ ರಸ ತಿಳಿಯಾದ ಹೊರಭಾಗದಲ್ಲಿ ಎಕ್ಟೋಪ್ಲಾಸಂ ಎಂಬ ಭಾಗ ಮತ್ತು ಒಳಭಾಗದಲ್ಲಿ ತರಿ ತರಿಯಾದ ಎಂಡೋಪ್ಲಾಸಂ ಭಾಗ ಇವೆ. ಸಾಮಾನ್ಯವಾಗಿ ಒಂದು ಬಾರಿಗೆ ಒಂದು ಅಥವಾ ಎರಡೇ ಮಿಥ್ಯಪಾದಗಳನ್ನು ಇದು ಹೊರಚಾಚುತ್ತದೆ. ದುಂಡನಾಗಿರುವ ನ್ಯೂಕ್ಲಿಯಸಿನ ತೆಳುವಾದ ಪೊರೆಗೆ ಅಂಟಿದಂತೆ ಒಳಭಾಗದಲ್ಲಿ ಮಣಿಗಳ ಸಾಲಿನಂತಿರುವ ಕ್ರೊಮ್ಯಾಟಿಡ್ ವಸ್ತು ಉಂಟು. ನ್ಯೂಕ್ಲಿಯಸಿನ ಮಧ್ಯದಲ್ಲಿ ದುಂಡಗೆ ಕಾಳಿನಂತಿರುವ ಕ್ಯಾರಿಯೋಸೊಮ್ ಇದೆ. ಇದು ಕ್ರೊಮ್ಯಾಟಿನ್ ಮತ್ತು ಪ್ಲಾಸ್ಟಿನ್ ಎಂಬ ವಸ್ತುಗಳಿಂದಾಗಿದೆ.

	ಕೋಶ ರಸದೊಳಗೆ ಆಹಾರ ಅವಕಾಶಗಳೂ (ಫುಡ್ ವ್ಯಾಕ್ಯೂಲ್) ಇವುಗಳೊಳಗೆ ಕೆಂಪು ರಕ್ತಕೋಶಗಳೂ ಇವೆ. ಎಂಟಮೀಬ ಹಿಸ್ಟೊಲಿಟಿಕದ ಆಹಾರ ಅವಕಾಶಗಳೊಳಗೆ ಕೆಂಪು ರಕ್ತ ಕೋಶಗಳಿರುವುದು ಒಂದು ವೈಶಿಷ್ಟ್ಯ. ಇದರಿಂದ ಇದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಸಂಕುಚಿತ ಸ್ಥಳಾವಕಾಶ ಈ ಪ್ರಾಣಿಯಲ್ಲಿ ಇಲ್ಲವೇ ಇಲ್ಲ.

	ಜೀವನ ಚರಿತ್ರೆ: ಕೇವಲ ನಿರ್ಲಿಂಗ ರೀತಿಯ ಸಂತಾನೋತ್ಪತ್ತಿ ಮಾತ್ರ ಇವುಗಳಲ್ಲಿದೆ. ವಯಸ್ಕ ಜೀವಿಯ ಶರೀರ ಇಬ್ಭಾಗವಾಗಿ ಸೀಳಿಹೋಗಿ ಎರಡು ಸ್ವತಂತ್ರ ಜೀವಿಗಳು ಹುಟ್ಟುತ್ತವೆ. ಈ ಕ್ರಿಯೆಯ ಕಾಲದಲ್ಲಿ ನ್ಯೂಕ್ಲಿಯಸ್ ಕೂಡ ಎರಡು ಭಾಗಗಳಾಗಿ ಒಡೆಯುತ್ತದೆ. ಸಂತಾನೋತ್ಪತ್ತಿಯಿಂದಾಗಿ ಇವುಗಳು ಹೆಚ್ಚಿದ ಮೇಲೆ ಇವು ಕರುಳಿನ ಗೋಡೆಯನ್ನು ಬಿಟ್ಟು ಹೊರಬರುತ್ತವೆ. ಕರುಳಿಗೆ ತಲುಪಿದ ಇವು ತಮ್ಮ ಮಿಥ್ಯ ಪಾದಗಳನ್ನು ಒಳಗೆಳೆದುಕೊಂಡು ದುಂಡಗಾಗುತ್ತವೆ. ಇವುಗಳ ನ್ಯೂಕ್ಲಿಯಸ್ ಅತಿ ದೊಡ್ಡದು. ಆಗ ಶರೀರದ ಸುತ್ತಲೂ ಒಂದು ರಕ್ಷಾಕವಚ ನಿರ್ಮಾಣಗೊಳ್ಳುತ್ತದೆ. ಈ ಜೀವಿಯನ್ನು ಕೋಶಜೀವಿ (ಸಿಸ್ಟ್) ಎನ್ನುತ್ತಾರೆ. ಈ ಕೋಶಜೀವಿಯ ಒಳಗೆ ಆಹಾರ ಪದಾರ್ಥಗಳು ಶೇಖರಗೊಂಡಿರುತ್ತವೆ. ಗ್ಲೈಕೋಜನ್ ಮತ್ತು ಕ್ರೊಮ್ಯಾಟಿನ್ ವಸ್ತುಗಳು ಈ ರೀತಿಯ ಶೇಖರಗೊಂಡ ಆಹಾರ ಪದಾರ್ಥಗಳಲ್ಲಿ ಮುಖ್ಯವಾದುವು. ಕ್ರೊಮ್ಯಾಟಿನ್ ತುಂಡು ತುಂಡಾಗಿರುವ ಕಡ್ಡಿಗಳಂತೆ ಕಂಡುಬರುತ್ತದೆ. ಈ ಕೋಶಜೀವಿಯ ಒಳಗಡೆ ನ್ಯೂಕ್ಲಿಯಸ್ ಎರಡು ಬಾರಿ ವಿಭಜನೆಗೊಳ್ಳುತ್ತದೆ. ಇದರಿಂದಾಗಿ ನಾಲ್ಕು ಕೋಶಕೇಂದ್ರಗಳು ಹುಟ್ಟುತ್ತವೆ. ಕೋಶಜೀವಿ ಕೂಡಿಟ್ಟ ಆಹಾರವನ್ನು ಉಪಯೋಗಿಸಿಕೊಂಡು ಬದುಕುತ್ತದೆ. ಗ್ಲೈಕೋಜನ್ ಮತ್ತು ಕ್ರೊಮ್ಯಾಟಿನ್ ವಸ್ತುಗಳು ಇದರಿಂದಾಗಿ ಮಾಯವಾಗುತ್ತವೆ. ಈ ರೀತಿ ಇರುವ ಕೋಶಜೀವಿಗಳು ಮಲ ವಿಸರ್ಜನೆಯ ಮೂಲಕ ಹೊರಬರುತ್ತವೆ. ಇವು ತೇವ ಮತ್ತು ಉಷ್ಣಾಂಶವಿರುವ ಭೂಮಿಯಲ್ಲಿ ಬಹಳ ದಿನ ಬದುಕಬಲ್ಲವು.

	ಹರಡುವಿಕೆ: ಈ ಜೀವಿಗಳು ಒಬ್ಬರಿಂದೊಬ್ಬರಿಗೆ ಅಶುಚಿಯಾದ ನೀರು ಮತ್ತು ಆಹಾರ ಪದಾರ್ಥಗಳ ಸೇವನೆಯಿಂದ ಹರಡುತ್ತವೆ. ಇವುಗಳ ಪ್ರಸಾರಕ್ಕೆ ಮನೆಯ ನೊಣಗಳು ಸಹಾಯ ಮಾಡುತ್ತವೆ. ಹಸಿ ತರಕಾರಿ, ಹಲಸಿನ ತೊಳೆ, ಕೊಬ್ಬರಿ ಮಿಠಾಯಿ ಮುಂತಾದ ಆಹಾರ ಪದಾರ್ಥಗಳು ಇವುಗಳ ಪ್ರಸಾರಕ್ಕೆ ಸಹಾಯಕವಾಗುತ್ತವೆ. ಹಳ್ಳಿಗಾಡುಗಳಲ್ಲಿ ಇವುಗಳ ಪ್ರಸಾರ ತೀವ್ರಗತಿಯಲ್ಲಿ ನಡೆಯುತ್ತದೆ. ಪಟ್ಟಣಗಳಲ್ಲಿ ಸುಧಾರಿಸಿದ ಒಳಚರಂಡಿ ವ್ಯವಸ್ಥೆ ಮತ್ತು ಸುಧಾರಿಸಿದ ಕಕ್ಕಸುಗಳು ಇದ್ದರೆ ಪ್ರಸಾರ ತೀವ್ರವಾಗಿ ಆಗದು. ಗಾಳಿಯೂ ಇವುಗಳ ಪ್ರಸಾರಕ್ಕೆ ಸಹಾಯ ಮಾಡುತ್ತದೆ.

	ಈ ರೀತಿಯ ಕೋಶಜೀವಿಗಳಿರುವ ಅಶುಚಿಯಾದ ಆಹಾರವನ್ನು ಮಾನವ ಸೇವಿಸಿದಾಗ ಇವು ಆತನ ಜೀರ್ಣಾಂಗವನ್ನು ತಲಪುತ್ತದೆ. ಸಣ್ಣ ಕರುಳಿನಲ್ಲಿ ನಾಲ್ಕು ನ್ಯೂಕ್ಲಿಯಸ್ ಇರುವ ಈ ಕೋಶಜೀವಿಯ ಗೋಡೆ ಕರಗಿ ಹೋಗುತ್ತದೆ. ಕೋಶರಸ ನ್ಯೂಕ್ಲಿಯಸ್ ಸಂಖ್ಯೆಗೆ ಅನುಗುಣವಾಗಿ ನಾಲ್ಕು ಭಾಗಗಳಾಗಿ ವಿಭಾಗ ಹೊಂದುತ್ತದೆ. ಈ ರೀತಿಯ ವಿಭಜನೆ ಕೋಶಜೀವಿಗೆ ಗೋಡೆ ಇದ್ದಾಗಲೇ ನಡೆಯಬಹುದು. ಹೀಗೆ ಬಿಡುಗಡೆಗೊಂಡ ಈ ಜೀವಿಗಳು ಸಣ್ಣಕರುಳಿನಿಂದ ದೊಡ್ಡ ಕರುಳಿಗೆ ಪ್ರವೇಶಿಸಿ ತಮ್ಮ ಸಂತಾನೋತ್ಪತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತವೆ.

	ರೋಗದ ಗುಣಲಕ್ಷಣಗಳು: ಎಂಟಮೀಬ ಹಿಸ್ಟೊಲಿಟಿಕ ಕರುಳಿನ ಒಳಗೋಡೆಯ ಅಂಗಾಂಶವನ್ನು ಕಿಣ್ವಗಳ ಸಹಾಯದಿಂದ ನಾಶಮಾಡುತ್ತದೆ. ಇದರಿಂದಾಗಿ ಕರುಳಿನ ಗೋಡೆಯಲ್ಲಿ ಗಾಯಗಳಾಗುತ್ತವೆ. ಈ ಗಾಯಗಳಿಂದ ರಕ್ತ ಮತ್ತು ಆಮು ಹರಿಯಲಾರಂಭಿಸುತ್ತವೆ. ಮಲವಿಸರ್ಜನೆಯ ಕಾಲದಲ್ಲಿ ಭಾರಿ ಪ್ರಮಾಣದಲ್ಲಿ ರಕ್ತ ಮತ್ತು ಆಮು ಹೊರಬರುತ್ತವೆ. ಕೆಲವೊಂದು ಬಾರಿ ಈ ಜೀವಿಗಳು ರಕ್ತಪರಿಚಲನೆಯ ಮೂಲಕ ಶರೀರದ ವಿವಿಧ ಭಾಗಗಳನ್ನು ತಲುಪಿ ಆ ಭಾಗದ ರಕ್ತನಾಳಗಳನ್ನೊಡೆದು ಕೀವು ತುಂಬಿದ ವ್ರಣಗಳನ್ನುಂಟುಮಾಡುವುವು. ಉತ್ಪತ್ತಿಗೆ ಕಾರಣವಾಗುವುವು. ಈ ರೋಗ ಸಾಂಕ್ರಾಮಿಕವಾಗಿ ಹರಡುವುದು ಕೂಡ ಉಂಟು. ರೋಗಿ ನಿಶ್ಯಕ್ತವಾಗುತ್ತಾನೆ. ಹೊಟ್ಟೆನೋವು, ತಲೆನೋವು, ಮಲಬದ್ಧತೆ, ನರಮಾಂದ್ಯ- ಇವು ರೋಗದ ಮುಖ್ಯ ಲಕ್ಷಣಗಳು. ರೋಗ ಉಲ್ಬಣಗೊಂಡಾಗ ಭೇದಿ, ರಕ್ತದ ಹೆಪ್ಪುಗಳು ಜಾಸ್ತಿ ಕಾಣಿಸಿಕೊಳ್ಳುತ್ತವೆ. ಇದರ ಜೊತೆ ಈ ಜೀವಿಗಳು ಹೊರಬರುತ್ತವೆ. ಈ ರೋಗವನ್ನು ತಡೆಯಲು ಎಮಿಟಿನ್ ಸೂಜಿಮದ್ದು, ಬಿಸ್ಮತ್ ಅಯೊಡೈಡ್ ಮುಂತಾದ ಔಷಧಿಗಳನ್ನು ಉಪಯೋಗಿಸುತ್ತಾರೆ. ತಡೆಗಟ್ಟುವಾಗ ಶುಚಿತ್ವಕ್ಕೆ ಆದ್ಯ ಗಮನ ಅಗತ್ಯ. ತರಕಾರಿಗಳನ್ನು ಬೇಯಿಸಿ ಉಪಯೋಗಿಸುವುದು, ಬಿಸಿನೀರನ್ನು ಉಪಯೋಗಿಸುವುದು ಅತಿಮುಖ್ಯ.

	ಎಂಟಮೀಬ ಕೊಲೈ: ಇದು ದೊಡ್ಡ ಕರುಳಿನಲ್ಲಿ ಪರತಂತ್ರ ಜೀವನವನ್ನು ನಡೆಸುತ್ತದೆ. ಪ್ರಪಂಚದ ಜನಾಂಗದ ಶೇ. 50ರಷ್ಟು ಜನರಲ್ಲಿ ಇದು ವಾಸಿಸಬಹುದೆಂದು ಎಂದು ತಿಳಿದುಬಂದಿದೆ. ಇದರಿಂದ ಯಾವ ತೊಂದರೆಯೂ ಇಲ್ಲ. ಕರುಳಿನಲ್ಲಿರುವ ಬ್ಯಾಕ್ಟೀರಿಯ ಜೀವಾಣುಗಳನ್ನು ತಿಂದು ಇದು ಬದುಕುತ್ತದೆ. ರಕ್ತ ಕೋಶಗಳನ್ನಾಗಲೀ ಅಂಗಾಂಶದ ಕೋಶಗಳನ್ನಾಗಲೀ ತಿನ್ನುವುದಿಲ್ಲ. ಈ ಪ್ರಾಣಿ ಎಂಟಮೀಬ ಹಿಸ್ಟೊಲಿಟಿಕಕ್ಕಿಂತ ಗಾತ್ರದಲ್ಲಿ ದೊಡ್ಡದು. ಎಕ್ಟೋಪ್ಲಾಸಂ ಮತ್ತು ಎಂಡೋಪ್ಲಾಸಂ ತಮ್ಮ ನಿರ್ದಿಷ್ಟತೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿವೆ. ನ್ಯೂಕ್ಲಿಯೋಲಸ್ ನ್ಯೂಕ್ಲಿಯಸಿನ ಮಧ್ಯಭಾಗದಲ್ಲಿರದೆ ಸ್ವಲ್ಪ ಪಕ್ಕಕ್ಕೆ ಸರಿದಿದೆ. ಈ ಜೀವಿಗಳ ಕೋಶಗಳಲ್ಲಿ ಎಂಟು ಕೋಶಕೇಂದ್ರಗಳಿರುತ್ತವೆ.	
ಎಂಟಮೀಬ ಜಿಂಜಿವ್ಯಾಲಿಸ್: ಇವು ಮಾನವ ಜನಸಂಖ್ಯೆಯ 70%ರಷ್ಟು ಜನರಲ್ಲಿ ಇವೆ. ವಸಡು ಮತ್ತು ಹಲ್ಲುಗಳ ಸಂದು ಇವುಗಳ ವಾಸಸ್ಥಾನ. ಹಲ್ಲುಗಳ ಸಂದುಗಳಲ್ಲಿ ಕೊಳೆಯುತ್ತಿರುವ ಆಹಾರ ಪದಾರ್ಥಗಳೂ ಬ್ಯಾಕ್ಟೀರಿಯಗಳೂ ಇವುಗಳ ಮುಖ್ಯ ಆಹಾರ. ಇವು ವಸಡಿಗೆ ಬರುವ ಪಯೋರಿಯ ಎಂಬ ರೋಗ ತರುತ್ತದೆ. ಒಬ್ಬರಿಂದೊಬ್ಬರಿಗೆ ಉಗುಳಿನ ಮೂಲಕ, ಎಂಜಲು ತಿನ್ನುವುದರ ಮೂಲಕ ಇವು ಹರಡುತ್ತವೆ. ಇವುಗಳ ಪ್ರಸಾರ ಮುತ್ತು ಕೊಡುವುದರ ಮೂಲಕ ತೀವ್ರಗತಿಯಲ್ಲಿ ನಡೆಯುತ್ತದೆ.   
	(ಜಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ